ಟ್ರಿಟಿಕೇಲ್ -
	ಗೋದಿ (ಟ್ರಿಟಿಕಮ್) ಮತ್ತು ರೈ (ಸಿಕೇಲ್) ಇವೆರಡರ ಸಂಕರಣದಿಂದ ಉತ್ಪಾದಿಸಲಾಗಿರುವ ಒಂದು ಹೊಸ ಸಸ್ಯಜಾತಿ. ಗೋದಿ ಮತ್ತು ರೈ ಗಿಡಗಳ ಜಾತಿಸೂಚಕ ಹೆಸರುಗಳನ್ನು ಕೂಡಿಸಿ ಈ ಹೆಸರನ್ನು ನೇಯಲಾಗಿದೆ. ತಳಿವಿಜ್ಞಾನಿಗಳು ಇದನ್ನು ಕುರಿತು ನಡೆಸಿರುವ ಕ್ರಮಬದ್ಧ ಸಂಶೋಧನೆಯ ಫಲವಾಗಿ, ಬಹುಶಃ ಇದುವರೆಗೂ ಬಳಕೆಯಲ್ಲಿರುವ ವಿವಿಧ ಆಹಾರಧಾನ್ಯಗಳೆಲ್ಲಕ್ಕಿಂತಲೂ ವ್ಯಾಪಕವಾಗಿ ಬಳಕೆಗೆ ಬರುವ ಒಂದು ಮಾನವ ನಿರ್ಮಿತ ಧಾನ್ಯ ಇದಾಗುವ ಸಾಧ್ಯತೆ ಉಂಟು.

	ಬತ್ತ, ಗೋದಿ, ಬಾರ್ಲಿ, ರೈ, ಓಟ್ಸ್ , ರಾಗಿ, ಜೋಳ ಮುಂತಾದ ಏಕದಳ ಧಾನ್ಯಗಳನ್ನು ಅನೇಕ ಸಹಸ್ರ ವರ್ಷಗಳಿಂದ ಮನುಷ್ಯ ತನ್ನ ಆಹಾರಕ್ಕಾಗಿ ಉಪಯೋಗಿಸುತ್ತಿದ್ದಾನೆ. ಅವುಗಳ ಕೃಷಿ ಮಾಡುತ್ತಿದ್ದಾನೆ. ಹುಲ್ಲಿನ ಕುಟುಂಬಕ್ಕೆ ಸೇರಿದ ಈ ಸಸ್ಯಗಳೆಲ್ಲವೂ ಬಹುಮಟ್ಟಿಗೆ ನೈಸರ್ಗಿಕ ವಿಕಾಸದ ಫಲವಾಗಿ ತಮಗೆ ರೂಪುಗೊಂಡವು. ಅವನ್ನು ಮನುಷ್ಯ ಪಳಗಿಸಿಕೊಂಡು ಕೃಷಿ ಮಾಡತೊಡಗಿದ ಮೇಲೆ ಅವುಗಳಲ್ಲಿ ಏನಾದರೂ ಬದಲಾವಣೆಯಾಗಿದ್ದರೆ ಅದು ಅಲ್ಪಸ್ವಲ್ಪ, ಅಷ್ಟೆ. ಪೂರ್ವ ಇರಾಕಿನಲ್ಲಿರುವ ಜಾರ್ಮೊ ಎಂಬಲ್ಲಿ ದೊರೆತಿರುವ ಪ್ರಾಚೀನ ಐತಿಹಾಸಿಕ ಅವಶೇಷಗಳಲ್ಲಿ 6700 ವರ್ಷಗಳಷ್ಟು ಹಿಂದಿನ ಕಾಲದ ಕಾರ್ಬನೀಕೃತ ಗೋದಿ ಸಿಕ್ಕಿದೆ. ಅದಕ್ಕೂ ಇಂದು ಬಳಕೆಯಲ್ಲಿರುವ ಕೆಲವು ಬಗೆಯ ಗೋದಿಗಳಿಗೂ ಇರುವ ವ್ಯತ್ಯಾಸ ಅತ್ಯಲ್ಪ.

	ಬೇರೆ ಬೇರೆ ತಳಿಗಳ ಸಂಕರಣದಿಂದ ನಮಗೆ ಬೇಕೆನಿಸುವ ನಿರ್ದಿಷ್ಟ ಗುಣಗಳಿರುವ ಮಿಶ್ರತಳಿಗಳನ್ನು ಉತ್ಪತ್ತಿಮಾಡುತ್ತಿರುವುದು ತೀರ ಈಚೆಗೆ. ಹಾಗೆ ಉತ್ಪತ್ತಿ ಮಾಡಿರುವ ಮಿಶ್ರತಳಿಗಳೇನಿದ್ದರೂ ನಮಗಾಗಲೇ ಪರಿಚಯವಿರುವ ಯಾವುದೋ ಒಂದು ಪ್ರಭೇದದ (ಸ್ಪೀಶೀಸ್ó) ಹೊಸ ಬಗೆಗಳೇ (ವೆರೈಟೀಸ್) ವಿನಾ ಅವು ಹೊಸದಾದ ಪ್ರಭೇದಗಳಲ್ಲ. ಆದರೆ, ಟ್ರಿಟಿಕೇಲ್ ಹಾಗಲ್ಲ. ಗೋದಿ ಮತ್ತು ರೈಗಳು ಬೇರೆ ಬೇರೆ ಪ್ರಭೇದಗಳು ಮಾತ್ರವಲ್ಲ, ಬೇರೆ ಬೇರೆ ಜಾತಿಗಳಿಗೆ (ಜೀನಸ್) ಸೇರಿದ ಪ್ರಭೇದಗಳು, ಇವುಗಳ ಸಂಕರಣದಿಂದ ಸೃಷ್ಟಿಸಲಾಗಿರುವ ಟ್ರಿಟಿಕೇಲನ್ನು ಒಂದು ಹೊಸ ಸಸ್ಯಜಾತಿ ಎಂದೇ ಪರಿಗಣಿಸಬೇಕಾಗುವುದು. ಈ ಜಾತಿಗೆ ಸೇರಿದಂತೆ ಬೇರೆ ಬೇರೆ ಪ್ರಭೇದಗಳು ಮುಂದೆ ರೂಪುಗೊಳ್ಳುವುದು ಸಾಧ್ಯ.

	ಸುಮಾರು ಒಂದು ಶತಮಾನದಷ್ಟು ಹಿಂದೆ, ಅಂದರೆ 1876ರಲ್ಲಿ ಎ. ಸ್ಟೀಫನ್‍ವಿಲ್ಸನ್ ಎಂಬಾತ ಗೋದಿ ಮತ್ತು ರೈಗಳ ಮಿಶ್ರತಳಿಯೊಂದನ್ನು ತಯಾರಿಸಿದುದಾಗಿ ಟ್ರಾನ್ಸ್‍ಸ್ಯಾಕ್ಷನ್ಸ್ ಆಫ್ ದಿ ಎಡಿನ್‍ಬರೊ ಬೊಟ್ಯಾನಿಕಲ್ ಸೊಸೈಟಿ ಎಂಬ ಪತ್ರಿಕೆಯಲ್ಲಿ ವರದಿ ಮಾಡಿದ. ಅನಂತರ 1889ರಲ್ಲಿ ಜರ್ಮನಿಯ ರಿಂಪೌ ಎಂಬಾತನೂ ಅಂಥ ಒಂದು ಮಿಶ್ರತಳಿಯ ಬಗ್ಗೆ ವರದಿ ಮಾಡಿದ. ಆದರೆ, ಅವನೂ ಅವನಂತೆ ಇತರ ಕೆಲವರೂ ತಯಾರಿಸಿದ ಮಿಶ್ರತಳಿಗಳು ಗೊಡ್ಡಾಗಿದ್ದು ಅವುಗಳ ಮುಸಂತಾನ ಸಾಧ್ಯವಾಗದೆ ಹೋದುದರಿಂದ ಅವನ್ನು ಆಹಾರದ ಬೆಳೆಯಾಗಿ ಅಭಿವೃದ್ಧಿ ಮಾಡುವ ಪ್ರಶ್ನೆಯೇ ಏಳಲಿಲ್ಲ. ಅನೇಕ ದಶಕಗಳ ಕಾಲ ಅದು ಪ್ರಯೋಗಶಾಲೆಗೆ ಸೀಮಿತವಾದ ಒಂದು ಕೌತುಕವಾಗಿಯೇ ಉಳಿಯಿತು. ಮರುಸಂತಾನ ಸಾಧ್ಯವಿರುವ ಟ್ರಿಟಿಕೇಲ್ ಮೊತ್ತಮೊದಲು ತಯಾರಾದದ್ದು 1937ರಲ್ಲಿ. ಫ್ರಾನ್ಸಿನ ಪಿಯರ್ ಗಿವೊಡಾನ್ ಎಂಬಾತ ಅದನ್ನು ತಯಾರಿಸಿದ. ಗೋದಿ ಮತ್ತು ರೈಗಳ ಸಂಕಿರಣದಿಂದ ದೊರಕುವ ಮೊದಲ ಪೀಳಿಗೆಯ ಟ್ರಿಟಿಕೇಲ್ ಗೊಡ್ಡಾಗಿರಲು ಕಾರಣವೇನೆಂದರೆ. ಅದರಲ್ಲಿ ಒಂದು ತಂಡ ರೈ ಕ್ರೋಮೊಸೋಮುಗಳೂ ಇರುತ್ತವೆ. ಇವು ಬೇರೆ ಬೇರೆ ಪ್ರಭೇದಗಳಿಂದ ಬಂದವಾದ್ದರಿಂದ ಒಂದರೊಡನೊಂದು ಜೊತೆಗೂಡುವುದಿಲ್ಲ. ಅಂದರೆ, ಲೈಂಗಿಕ ಪುನರುತ್ಪಾದನೆ ನಡೆಯುವುದಿಲ್ಲ. ಆದ್ದರಿಂದ ಇದರ ಮರುಸಂತಾನ ಸಾಧ್ಯವಿಲ್ಲ. ಗಿವೊಡಾನ್‍ನ ಒಂದು ಆವಿಷ್ಕಾರದಿಂದ ಈ ಸಮಸ್ಯೆಗೆ ಪರಿಹಾರ ಸಿಕ್ಕಿತು. ಮೊದಲ ಪೀಳಿಗೆಯ ಟ್ರಿಟಿಕೇಲ್ ಆಗ ತಾನೇ ಮೊಳೆತು ಸಸಿಯಾಗುತ್ತಿರುವಾಗ ಅದನ್ನು ಕಾಲ್ಚಿಸೀನ್ ಎಂಬ ಆಲ್ಕಲಾಯ್ಡ್‍ನಿಂದ ಉಪಚರಿಸಿದರೆ ಅದರ ಜೀವಕೋಶಗಳಲ್ಲಿನ ಕ್ರೋಮೊಸೋಮುಗಳ ಸಂಖ್ಯೆ ದ್ವಿಗುಣಿತವಾಗುತ್ತದೆ. ಆಗ ಗೋದಿ ಕ್ರೋಮೊಸೋಮುಗಳು ಗೋದಿ ಕ್ರೋಮೊಸೊಮುಗಳು ರೈಕ್ರೋಮೊಸೋಮುಗಳೊಂದಿಗೂ ಜೊತೆಗೂಡಲು ಯಾವ ಅಡ್ಡಿಯೂ ಉಂಟಾಗದು. ಈ ರೀತಿ ಅದರ ಗೊಡ್ಡು ತನವನ್ನು ಹೋಗಲಾಡಿಸಬಹುದು.

	ಮರುಸಂತಾನ ಸಾಧ್ಯವಿರುವ ಟ್ರಿಟಿಕೇಲ್ ದೊರೆತ ಬಳಿಕ ಅದನ್ನು ಆಹಾರ ಯೋಗ್ಯ ಬೆಳೆಯನ್ನಾಗಿ ಅಭಿವೃದ್ಧಿಪಡಿಸುವುದು ಮುಂದಿನ ಕೆಲಸ. ಅದಕ್ಕಾಗಿ ಬೇರೆ ಬೇರೆ ಟ್ರಿಟಿಕೇಲ್ ತಳಿಗಳನ್ನು ಸಂಕರಿಸಿ ಅಪೇಕ್ಷಿತ ಗುಣಗಳಿರುವ ಹೊಸ ಟ್ರಿಟಿಕೇಲ್ ತಳಿಗಳನ್ನು ತಯಾರಿಸಬೇಕು. ಈ ದಿಶೆಯಲ್ಲಿ ಪ್ರಯೋಗಗಳನ್ನು ಜಗತ್ತಿನ ನಾನಾ ಕಡೆಗಳಲ್ಲಿ, ಮುಖ್ಯವಾಗಿ ಕೆನಡ ಮತ್ತು ಹಂಗೇರಿಗಳಲ್ಲಿ, ಕೈಗೊಳ್ಳಲಾಯಿತು. ಇಂದು ಈ ಕ್ಷೇತ್ರದ ವ್ಯಾಪಕವಾದ ಮತ್ತು ಫಲದಾಯಕವಾದ ಸಂಶೋಧನೆ ನಡೆಯುತ್ತಿರುವುದು ಕೆನಡದ ಮ್ಯಾನಿಟೋಬ ವಿಶ್ವವಿದ್ಯಾಲಯದಲ್ಲಿ ಹಾಗೂ ಮೆಕ್ಸಿಕೊದಲ್ಲಿರುವ ಅಂತಾರಾಷ್ಟ್ರೀಯ ಮೆಕ್ಕೆಜೋಳ ಮತ್ತು ಗೋದಿ ಅಭಿವೃದ್ಧಿ ಕೇಂದ್ರದಲ್ಲಿ. ಈ ಎರಡು ತಂಡಗಳ ಸಹಕಾರದಿಂದ ನಡೆಯುತ್ತಿರುವ ಸಂಶೋಧನೆಯ ಫಲವಾಗಿ ಆಹಾರಯೋಗ್ಯ ಟ್ರಿಟಿಕೇಲ್ ತಳಿಗಳು ಈಗ ಸಿದ್ಧವಾಗಿವೆ.

	ಅಧಿಕ ಇಳುವರಿ ಕೊಡುವ ಗೋದಿ ತಳಿಗಳನ್ನು ಆವಿಷ್ಕರಿಸಿದುದಕ್ಕಾಗಿ 1970ರಲ್ಲಿ ನೊಬೆಲ್ ಪಾರಿತೋಷಿಕವನ್ನು ಪಡೆದ ನಾರ್ಮನ್ ಇ. ಬೊರ್ಲಾಗ್ ಅವರು ಮೆಕ್ಸಿಕೊದಲ್ಲಿ ನಡೆಯುತ್ತಿರುವ ಸಂಶೋಧನೆಯ ನೇತಾರರಲ್ಲೊಬ್ಬರು. ಮ್ಯಾನಿಟೋಬದಲ್ಲಿ ನಡೆಯುತ್ತಿರುವ ಸಂಶೋಧನೆಯನ್ನು ನಿರ್ದೇಶಿಸುತ್ತಿರುವವರು ಲಿಯೊನಾರ್ಡ್ ಷೆಬೆಸ್ಕಿ ಮತ್ತು ಎಡ್ವರ್ಡ್‍ಲಾರ್ಟರ್ ಅವರು.

	ಶಾಕಾಹಾರಿಗಳಿಗೆ ಸುಲಭವಾಗಿ ದೊರೆಯದಿರುವ ಒಂದು ಪೌಷ್ಟಿಕಾಂಶವೆಂದರೆ ಪ್ರೋಟೀನ್. ಆದ್ದರಿಂದ ಸಸ್ಯಮೂಲ ಆಹಾರಪದಾರ್ಥಗಳ ಪೌಷ್ಟಿಕ ಮೌಲ್ಯವನ್ನು ನಿರ್ಧರಿಸುವಾಗ ಅವುಗಳಲ್ಲಿ ದೊರೆಯುವ ಪ್ರೋಟೀನಿಗೆ ವಿಶೇಷ ಲಕ್ಷ್ಯಹರಿಸುವುದು ಸಹಜವಾಗಿಯೇ ಇದೆ. ರೈಗಿಂತ ಗೋದಿಯಲ್ಲಿ ಪ್ರೋಟೀನ್ ಅಂಶ ಹೆಚ್ಚು. ಆದರೆ, ಯಾವುದೇ ಆಹಾರ ಪದಾರ್ಥದಲ್ಲಿರುವ ಪ್ರೋಟೀನಿನ ಪರಿಮಾಣ ಒಂದೇ ಮುಖ್ಯವಲ್ಲ ; ಆ ಪ್ರೋಟಿನಿನ ಗುಣವನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಈ ದೃಷ್ಟಿಯಿಂದ ನೋಡಿದರೆ ರೈನಲ್ಲಿರುವ ಪ್ರೋಟೀನುಗೋದಿಯ ಪ್ರೋಟೀನಿಗಿಂತ ಉತ್ತಮ ತೆರನಾದುದು. ಏಕೆಂದರೆ ಅದರ ಅಮೈನೊ ಆಮ್ಲಸಂಯೋಜನೆ ಹಾಗಿದೆ. ಸಾಮಾನ್ಯವಾಗಿ ಆಹಾರ ಪದಾರ್ಥಗಳಲ್ಲಿರುವ ಪ್ರೋಟೀನುಗಳು ಹದಿನೆಂಟು ಬೇರೆ ಬೇರೆ ಅಮೈನೊ ಆಮ್ಲಗಳಿಂದ ಆದವು. ಇವುಗಳಲ್ಲಿ ಹತ್ತನ್ನು ಅಗತ್ಯ ಅಮೈನೊ ಆಮ್ಲಗಳು ಎಂದು ಕರೆಯುತ್ತಾರೆ. ಏಕೆಂದರೆ ನಾವು ಇವನ್ನು ಆಹಾರದ ಮೂಲಕವೇ ಪಡೆಯಬೇಕು. ಇವು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ. ಅಗತ್ಯ ಅಮೈನೊ ಆಮ್ಲಗಳಲ್ಲಿ ಲೈಸೀನ್ ಎಂಬುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡುವುದುಂಟು. ಏಕೆಂದರೆ ಇದು ಸಸ್ಯಾಹಾರ ಪದಾರ್ಥಗಳಲ್ಲಿ ದೊರೆಯುವುದು ವಿರಳ. ರೈನಲ್ಲಿ ಆಗಲೇ ಹೇಳಿದಂತೆ ಪ್ರೋಟೀನ್ ಅಂಶ ಕಡಿಮೆಯಾದರೂ ಅದರಲ್ಲಿ ಲೈಸೀನ್ ಮೊತ್ತ ಹೆಚ್ಚು. ಟ್ರಿಟಿಕೇಲಿನ ಆಕರ್ಷಣೆ ಏನೆಂದರೆ, ಗೋದಿಯಂತೆ ಅಧಿಕಾಂಶ ಪ್ರೋಟೀನು, ರೈನಂತೆ ಅಧಿಕಾಂಶ ಲೈಸೀನು ಇದರಲ್ಲಿ ದೊರೆಯುತ್ತದೆ. 

	ಸೂಕ್ತ ತಳಿಗಳನ್ನು ಆರಿಸಿಕೊಂಡು ಇವನ್ನು ಒಂದರೊಡನೊಂದು ಸಂಕರಿಸುವುದರಿಂದ ಇದೇ ರೀತಿ ಗೋದಿ ಮತ್ತು ರೈಗಳ ಇತರ ಅನೇಕ ಅಪೇಕ್ಷಣೀಯ ಗುಣಗಳನ್ನೂ ಟ್ರಿಟಿಕೇಲಿನಲ್ಲಿ ಒಟ್ಟುಗೂಡಿಸುವುದರಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಉದಾಹರಣೆಗೆ, ರೈಗಿಂತ ಗೋದಿಯ ಇಳುವರಿ ಹೆಚ್ಚು. ಆದರೆ ಇಳುವರಿಯಲ್ಲಿ ಟ್ರಿಟಿಕೇಲ್ ಗೋದಿಯನ್ನೂ ಮೀರಿಸುತ್ತದೆ. ಇದುವರೆಗೆ ಒಂದು ಎಕರೆಯಲ್ಲಿ ಮೂವತ್ತು ಕ್ವಿಂಟಾಲಿಗಿಂತ ಹೆಚ್ಚು ಗೊದಿಯನ್ನೂ ಯಾರೂ ಬೆಳಸಿಲ್ಲ. ಅದೇ ಟ್ರಿಟಿಕೇಲನ್ನಾದರೂ 33.5 ಕ್ವಿಂಟಾಲಿನಷ್ಟು ಬೆಳೆಸಿದ್ದಾರೆ. ಹೀಗೆಯೇ ಗೋದಿಯಲ್ಲಿಲ್ಲದ ಆದರೆ ರೈನಲ್ಲಿ ಕಂಡುಬರುವ ಇನ್ನೂ ಕೆಲವು ಅಪೇಕ್ಷಣೀಯ ಗುಣಗಳಾದ ಅನೇಕ ಬಗೆಯ ಅಹಿತಕರ ಹವೆಗಳಲ್ಲಿಯೂ ಹುಲುಸಾಗಿ ಬೆಳೆಯುವುದು, ತುಕ್ಕುರೋಗಕ್ಕೆ ಸುಲಭವಾಗಿ ಈಡಾಗದಿರುವುದು ಇತ್ಯಾದಿಗಳನ್ನೂ ಟ್ರಿಟಿಕೆಲಿನಲ್ಲಿ ತರಲಾಗಿದೆ.

	ಇಂದು ಜಗತ್ತಿನ ಐವತ್ತೆರಡು ಬೇರೆ ಬೇರೆ ದೇಶಗಳಲ್ಲಿ ಒಟ್ಟು ಸುಮಾರು ಹತ್ತು ಲಕ್ಷ ಎಕರೆ ವಿಸ್ತೀರ್ಣ ಭೂಮಿಯಲ್ಲಿ ಟ್ರಿಟಿಕೇಲನ್ನು ಬೆಳೆಸುತ್ತಿದ್ದಾರೆ. ಕೆನಡದ ಪ್ರೈರಿಗಳಿಂದ ಹಿಡಿದು ಹಿಮಾಲಯದ ತಪ್ಪಲು ಪ್ರದೇಶಗಳ ವರೆಗೆ ನಾನಾ ಬಗೆಯ ವಾತಾವರಣಗಳಲ್ಲಿಯೂ ಹವೆಗಳಲ್ಲಿಯೂ ಅದು ಬೆಳೆಯುತ್ತಿದೆ. ಇದರಿಂದ ಬ್ರೆಡ್ ತಯಾರಿಸಬಹುದು. ಭಾರತದವರಿಗೆ ಹಿತವೆನಿಸುವ ದೋಸೆ, ಚಪಾತಿಗಳನ್ನೂ ಆಫ್ರಿಕನರ ಇಂಜೇರ ಬ್ರೆಡ್ಡನ್ನೂ ತಯಾರಿಸಬಹುದು. ಇವೆಲ್ಲ ಕಾರಣಗಳಿಂದ ಮುಂದಿನ ಒಂದೆರಡು ದಶಕಗಳಲ್ಲಿ ಈ ಮಾನವನಿರ್ಮಿತ ಧಾನ್ಯ, ಇದುವರೆಗೆ ಬಳಕೆಯಲ್ಲಿರುವ ಎಲ್ಲ ಧಾನ್ಯಗಳೊಂದಿಗೆ ಯಶಸ್ವಿಯಾಗಿ ಪೈಪೋಟಿ ನಡೆಸುವ ಸಾಧ್ಯತೆ ಇದೆ.
(ಜೆ.ಆರ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ